ಶುಕ್ರವಾರ, ಮಾರ್ಚ್ 24, 2023

ನಿರ್ಗುಣಬ್ರಹ್ಮವೇ ಮೋಕ್ಷಕ್ಕೆ ಕಾರಣ

ಪ್ರತ್ಯಸ್ತಮಿತಭೇದಂ ಯತ್ಸತ್ತಾಮಾತ್ರಗೋಚರಮ್।
ವಚಸಾಮಾತ್ಮಸಂವೇದ್ಯಂ ತಜ್ಜ್ಞಾನಂ ಬ್ರಹ್ಮಸಂಜ್ಞಿತಮ್  ॥
ತಚ್ಚ ವಿಷ್ಣೋಃ ಪರಂ ರೂಪಮರೂಪಾಖ್ಯಮನುತ್ತಮಮ್ । ವಿಶ್ವಸ್ವರೂಪವೈರೂಪ್ಯಲಕ್ಷಣಂ ಪರಮಾತ್ಮನಃ ॥ ( ವಿಷ್ಣು ಪುರಾಣ 6.7. 53-54)
 ಯಾವುದರಲ್ಲಿ  ಸಮಸ್ತಭೇದವೂ ಲಯಿಸಿಹೋಗಿವೆಯೋ  ಯಾವುದು ಸತ್ತಾಮಾತ್ರಸ್ವರೂಪವಾಗಿದ್ದು ಮಾತುಗಳಿಗೆ ಅಗೋಚರವಾಗಿದೆಯೋ ಸ್ವಾನುಭವಮಾತ್ರಗಮ್ಯವಾಗಿದೆಯೋ ಆ ಜ್ಞಾನಕ್ಕೆ "ಬ್ರಹ್ಮ" ಎಂದು ಹೆಸರು . ಅದು ರೂಪರಹಿತವೂ ಪರಮಶ್ರೇಷ್ಠವೂ ಆದ  ವಿಷ್ಣುವಿನ ಪರವೆಂಬ ಸ್ವರೂಪವಾಗಿದೆ. ವಿಶ್ವರೂಪಕ್ಕಿಂತ ವಿಲಕ್ಷಣವಾಗಿರುವುದೇ ಪರಮಾತ್ಮನ ಆ ಪರ ಸ್ವರೂಪದ ಲಕ್ಷಣ. 

ಇಲ್ಲಿಯೂ ಅದ್ವೈತದಲ್ಲಿ ಹೇಳುವ ಪರಬ್ರಹ್ಮಸ್ವರೂಪದ  ವಿವರಣೆ ಸ್ಪಷ್ಟವಾಗಿ ತೋರುತ್ತದೆ. ವ್ಯಾಸರು ವಿಷ್ಣು ಪುರಾಣವನ್ನು ಸಗುಣಪರಮಾತ್ಮನ ಗುಣಕಥನಗಳಿಗೇ ಹೆಚ್ಚು ಒತ್ತುಕೊಟ್ಟುರಚಿಸಿದ್ದಾದರೂ ಪರಮಾತ್ಮನ ಸ್ವರೂಪವಿವರಣೆಯಲ್ಲಿ  ಮರೆಯದೇ ನಿರ್ಗುಣ ಸಗುಣರೂಪಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅದಲ್ಲದೇ ಆ ಪರತತ್ವವಾದ ನಿರ್ಗುಣರೂಪವನ್ನು "ಬ್ರಹ್ಮ "ಎಂದೇ ಕರೆಯಲ್ಪಟ್ಟಿದೆ..  ಅದಕ್ಕಾಗಿ ಬ್ರಹ್ಮಸೂತ್ರದಲ್ಲಿ ಕೂಡ  "ಅಥಾತೋ ಬ್ರಹ್ಮಜಿಜ್ಞಾಸಾ"  ಎಂದೇ ಹೇಳಲ್ಪಟ್ಟಿದೆ.  ಅದಕ್ಕಾಗಿಯೇ ಆಚಾರ್ಯ ಶಂಕರರು ಕೂಡ "ಬ್ರಹ್ಮನ್"ಎನ್ನುವ ಶಬ್ದಕ್ಕೆ ವಿಷ್ಣು  ಶಿವ ಇತ್ಯಾದಿ ಸಗುಣಪರಮಾತ್ಮನ ಹೆಸರನ್ನು ಆರೋಪಿಸದೇ ವಿವರಿಸಿದ್ದಾರೆ . ಅದಲ್ಲದೇ ಉಪನಿಷತ್ತುಗಳಲ್ಲಿ ಕೂಡ ಎರಡು ವಿಧವಾದ ಪರಮಾತ್ಮನನ್ನು ತಿಳಿಸುವ ವಾಕ್ಯಗಳು ಕಾಣಸಿಗುತ್ತವೆ.  ಅವುಗಳೆಲ್ಲದರ ಸ್ಪಷ್ಟತೆಗಾಗಿ ಪರಮಾತ್ಮನ ಸ್ವರೂಪಗಳು ಯಾವುದೆಂದು ತಮ್ಮ  ಬ್ರಹ್ಮಸೂತ್ರಭಾಷ್ಯದಲ್ಲಿ ಹೀಗೆ ವಿವರಿಸಿದ್ದಾರೆ.

"ದ್ವಿರೂಪಂ ಹಿ ಬ್ರಹ್ಮ ಅವಗಮ್ಯತೇ | ನಾಮರೂಪವಿಕಾರಭೇದೋಪಾದಿವಿಶಿಷ್ಟಮ್, ತದ್ವಿಪರೀತಂ ಚ ಸರ್ವೋಪಾಧಿವರ್ಜಿತಮ್ | "
(ಬ್ರಹ್ಮಸೂತ್ರ #ಶಂಕರಭಾಷ್ಯ  ಅಧ್ಯಾಯ ೧-ಪಾದ ೧-ಅಧಿಕರಣ ೬ - ಸೂತ್ರ ೧೨)
 ಒಂದು ನಾಮ , ರೂಪಗಳೆಂಬ ವಿಕಾರ ಭೇದದಿಂದ ಪರಮಾತ್ಮನನ್ನು ತಿಳಿಸುವ ವಾಕ್ಯಗಳು ಮತ್ತು ನಾಮ ,ರೂಪ ವಿಕಾರಭೇದಗಳಿಲ್ಲದ  ನಿರಾಕಾರವು, ನಿರ್ಗುಣವೂ, ನಿರ್ವಿಶೇಷವೂ ಆದ ಪರಮಾತ್ಮನನ್ನು ಪ್ರತಿಪಾದಿಸುವವುಗಳು....
ಅದರಲ್ಲಿ ನಿರ್ವಿಶೇಷವಾದ ಆತ್ಮತತ್ವವೇ ಅತ್ಯಂತ ಪ್ರಧಾನವಾದದ್ದು.ಮತ್ತು ಪಡೆಯಬೇಕಾದದ್ದು..ನಾಮ,ರೂಪ ಗುಣವಿಶಿಷ್ಟವಾದವುಗಳು ಅಂದರೆ ಸಗುಣಬ್ರಹ್ಮವು ಉಪಾಸನೆಗಾಗಿ ಮಾತ್ರ ಹೇಳಿರುವವುದು..ಪರಮಾರ್ಥವಾಗಿ ನಾಮ,ರೂಪಗಳು ಸತ್ಯವಾದವುಗಳಲ್ಲ ಅವು ಮಿಥ್ಯಾಭೂತವಾದವುಗಳು..ಆದರೂ ಅವುಗಳನ್ನು ವೇದ ಹೇಳಿರುವುದು ಉಪಾಸಕನಿಗೆ ಅವುಗಳಲ್ಲಿ ಮನಸ್ಸನ್ನು ನಿಲ್ಲಿಸಿ ಉಪಾಸನೆ ಮಾಡುವುದಕ್ಕೆ ಸಹಕಾರಿಯಾಗಿ ಚಿತ್ತಶುದ್ಧಿಯುಂಟಾಗಲಿ ಎಂದು. ಮತ್ತು ಸಾಧಕರಿಗೆ  ಅದು ಸುಲಭ ಮಾರ್ಗ ಕೂಡಾ. ಆದರೆ ಅಂತಿಮವಾಗಿ  ಪರಮಲಕ್ಷ್ಯವಾದ ನಿರ್ಗುಣಬ್ರಹ್ಮಾನುಭವವೇ ಮೋಕ್ಷಕ್ಕೆ ಕಾರಣ ಎನ್ನುವುದನ್ನು ಮರೆಯಬಾರದು. 
....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ