ಶುಕ್ರವಾರ, ಮಾರ್ಚ್ 24, 2023

ಏಕಾತ್ಮವಾದವೇ ವೇದಾಂತಸಿದ್ಧಾಂತ

ದ್ವೈತಿಗಳು ಅದ್ವೈತವನ್ನು ಟೀಕಿಸುತ್ತಾ ಅದ್ವೈತಿಗಳಿಗೆ ನೀವು ಒಂದೇ ವಸ್ತುವಿಗೆ ( ಏಕಾತ್ಮಸಿದ್ಧಾಂತಕ್ಕೆ)  ಜೋತುಬಿದ್ದಿದ್ದು  ತಪ್ಪು ಎನ್ನುತ್ತಾರೆ.. ಆದರೆ ಶಾಸ್ತ್ರ ರೀತ್ಯಾ ಅದು ಸರಿಯಲ್ಲ 
'ಇದಂ ಸರ್ವಂ ಯದಯಮಾತ್ಮಾ', 'ಆತ್ಮವೇದಂ ಸರ್ವಂ', 'ಸರ್ವಂ ಖಲ್ವಿದಂ
ಬ್ರಹ್ಮ' ಇತ್ಯಾದಿ ನೂರಾರು ಶ್ರುತಿವಾಕ್ಯಗಳು ಸಕಲವೂ ಆತ್ಮನೇ, ಆತ್ಮನನ್ನು ಬಿಟ್ಟು
ಇನ್ನೊಂದು ವಸ್ತುವಿಲ್ಲವೆಂದು ಸಾರುತ್ತವೆ. ಹೀಗೆ ಅಭೇದಶ್ರುತಿ ಗಳಿರುವಂತೆ 'ದ್ವಾ
ಸುಪರ್ಣಾ ಸಯುಜಾ ಸಖಾಯಾ' ಇತ್ಯಾದಿ ಕೆಲವೇ ಕೆಲವು ಭೇದಶ್ರುತಿಗಳೂ ಉಂಟು. ಆದ್ದರಿಂದ
ಏಕಾತ್ಮವಾದವು ಹೇಗೆ ಸಿದ್ದಾಂತವಾಗಿ ನಿಂತೀತು? ಎಂಬ ಪ್ರಶ್ನೆ ಸಹಜವಾಗಿ
ಹುಟ್ಟಿಕೊಳ್ಳುತ್ತದೆ. ಅದಕ್ಕೆ ಸಮಾಧಾನವನ್ನು ಈ ಪ್ರಕಾರವಾಗಿ ಹೇಳಬಹುದು.
೧. ಶಾಸ್ತ್ರವು ಅಜ್ಞಾತಜ್ಞಾಪಕ ಎಂಬುದು ಎಲ್ಲರೂ ಒಪ್ಪಿರುವ ಸಿದ್ಧಾಂತ. ಯಾವುದು ಇಂದ್ರಿಯ
ಗೋಚರವಲ್ಲವೋ ಸಾಮಾನ್ಯರ ಬುದ್ಧಿಗೆ ನಿಲುಕುವುದಿಲ್ಲವೋ ಅದನ್ನು
ತಿಳಿಸಿಕೊಡತಕ್ಕದ್ದು ಶಾಸ್ತ್ರ. ಇದು ವೇದಾಂತಕ್ಕೆ ಮಾತ್ರ ಸೀಮಿತವಲ್ಲ. ಸಾಂಖ್ಯಾದಿ
ಸಮಸ್ತ ಶಾಸ್ತ್ರಗಳಿಗೂ ಅನ್ವಯಿಸತಕ್ಕ ಮಾತು. ಭೇದವು ಲೋಕ ಸಿದ್ಧವಾಗಿದೆ.
ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ತಿರ್ಯಗ್‌ಜಂತುವಿಗೂ ಸಹ ನಾನು
ಬೇರೆ, ನೀನು ಬೇರೆ, ಈ ಪದಾರ್ಥವು ಬೇರೆ ಎಂಬ ಜ್ಞಾನ ಇದ್ದೇ ಇರುತ್ತದೆ.
ನಮ್ಮೆಲ್ಲರನ್ನು ಪಾಲಿಸತಕ್ಕ, ದಂಡಿಸತಕ್ಕ ದೇವರೊಬ್ಬನು ಆಕಾಶದಲ್ಲಿ
ಎಲ್ಲಿಯೋ ಇದ್ದಾನೆಂದು ಕಾಡು ಜನರೂ ತಿಳಿದಿದ್ದಾರೆ. ಇಂತಹ ದ್ವೈತವನ್ನು
ಶಾಸ್ತ್ರವು ಉಪದೇಶಿಸಬೇಕಾಗಿಲ್ಲ.
೨. ದ್ವೈತವೇ ಪರಮಾರ್ಥವಾದರೆ ಅಭೇದವನ್ನು ಬೋಧಿಸುವ ನೂರಾರು
ಶ್ರುತಿವಾಕ್ಯಗಳು ಏಕೆ ಹೊರಟವು? ಅವನ್ನು ಕ್ಲೇಶದಿಂದ ಜಗ್ಗಿ ಎಳೆದು ದ್ವೈತ
ವಿರೋಧವಿಲ್ಲವೆಂದು ಕಸರತ್ತು ಮಾಡಬೇಕಾದ ಸಂದರ್ಭವನ್ನು ಶ್ರುತಿಯು ಏಕೆ
ಕಲ್ಪಿಸಿದೆ?
೩. ಹಾಗಿದ್ದರೆ ಭೇದವನ್ನು ಸೂಚಿಸುವ ಕೆಲವೇ ಕೆಲವು ದ್ವೈತ ಶ್ರುತಿಗಳು ಏಕೆ ಹೊರಟಿವೆ?ಎಂದು
ಕೇಳಬಹುದು.  ದ್ವೈತದಲ್ಲಿ ನಿಲ್ಲದೆ ಅದ್ವೈತವನ್ನು ಬೋಧಿಸುವುದಕ್ಕೆ
ಆಗುವುದಿಲ್ಲ. ಗುರುಶಿಷ್ಯ ಪರಂಪರೆಯೇ ಇಲ್ಲದೆ ಹೋದೀತು. ಗ್ರಂಥರಚನೆಯೇ
ಅಶಕ್ಯವಾದೀತು. 'ಸರ್ವವೂ ಆತ್ಮ' ಎಂದು ತಿಳಿಸಿಕೊಡುವಾಗ ಸರ್ವವೆಂಬ
ಈ ಜಗತ್ತನ್ನು ಕೈಮಾಡಿ ತೋರಿಸಲೇಬೇಕಲ್ಲವೆ? ಲೋಕಸಿದ್ಧವಾದ ದ್ವೈತವನ್ನು
ಅನುವಾದಿಸಿ ಅನಂತರ ಅದನ್ನು ನಿಷೇಧಿಸಬೇಕಾಗುತ್ತದೆ. 'ಅಸತ್ಯೇ ವರ್ತನಿ
ಸ್ಥಿತ್ವಾ ತತಃ ಸತ್ಯಂ ಸಮೀಹತೇ', ಅಸತ್ಯ ಮಾರ್ಗದಲ್ಲಿ ನಿಂತು ಸತ್ಯವನ್ನು
ಶೋಧಿಸತೊಡಗಬೇಕಾಗುತ್ತದೆ. ಇದು ಭರ್ತೃಹರಿಯ ಮಾತು.

ಅಧ್ಯಾರೋಪಾಪವಾದ ನ್ಯಾಯದ ಸಾರಾಂಶವೇ ಇದು. ಶ್ರುತಿಯು ಎಲ್ಲಿಯೂ
ಅಭೇದವನ್ನು ನಿಷೇಧಿಸಿಲ್ಲ. ಆದರೆ ನೂರಾರು ಕಡೆ ಭೇದವನ್ನು ನಿಷೇಧಿಸಿದೆ.ಪುರಾಣಾದಿಗಳೂ ಕೂಡ ನೇರವಾದ ದ್ವೈತ ಎನ್ನುವ ಶಬ್ದವನ್ನು ಬಳಸಿಯೇ ನಿಂದಿಸಿದೆ .

೪. ಆತ್ಮಜ್ಞಾನಿಗಳ ಅನುಭವವೂ ಸಹ ಏಕತ್ಮವಾದಕ್ಕೆ ಪ್ರಮಾಣ, ಸಮಸ್ತ ಪ್ರಾಣಿಗಳು
ತಾವು ಯಾರೆಂಬ ಸತ್ಯವನ್ನು ತಿಳಿಯದಿದ್ದರೂ ಸ್ವತಃ ಬ್ರಹ್ಮ ಸ್ವರೂಪವಾಗಿಯೇ
ಇರುತ್ತವೆ. 'ನಾನ್ಯೋತೋsಸ್ತಿ ದೃಷ್ಟಾ' ಇತ್ಯಾದಿ ಶ್ರುತಿಗಳು ಇದಕ್ಕೆ ಪ್ರಮಾಣ.
"ಏಕವಿಜ್ಞಾನೇನ ಸರ್ವಂ ವಿಜ್ಞಾತಂ ಭವತಿ" ಏಕವಿಜ್ಞಾನದಿಂದ ಸರ್ವವನ್ನೂ ತಿಳಿಯಲಾಗುತ್ತದೆ' ಇತ್ಯಾದಿ ವೇದಾಂತ
ವಾಕ್ಯಗಳು ದ್ವೈತ ಪಕ್ಷದಲ್ಲಿ ಸಂಗತವಾಗುವುದಿಲ್ಲ. ಸರ್ವವೂ ಆತ್ಮವೇ ಎಂಬ
ಜ್ಞಾನ ಯಾರಿಗೆ ಹುಟ್ಟುತ್ತದೆಯೋ ಅವನಿಗೆ ಕಾಮನೆಗಳು ಇರುವುದಿಲ್ಲ.
ಇನ್ನೊಂದು ವಸ್ತುವಿದೆಯೆಂದು ತಿಳಿದಾಗಲ್ಲವೆ ಅದು ಬೇಕು ಎಂಬ ಕಾಮನೆ
ಹುಟ್ಟುವುದು? ತಾನೇ ಬೇಕೆಂದು ಕಾಮನೆ ಹುಟ್ಟುವುದಿಲ್ಲ. ಪ್ರಾಚೀನ ಸಮಸ್ತ
ವೇದಾಂತಿಗಳೂ ಉಪನಿಷತ್ತುಗಳಲ್ಲಿ ಜೀವಾತ್ಮ ಪರಮಾತ್ಮರ
ಐಕ್ಯಬೋಧನೆಯೆಂದು ಒಪ್ಪಿದ್ದಾರೆ. ಅದನ್ನು ತಿಳಿಯುವ ವಿಧಾನ
ಹೇಗೆಂಬುದರಲ್ಲಿ ಮಾತ್ರ ಪ್ರಾಚೀನ ವೇದಾಂತಿಗಳಲ್ಲಿ ಮತಭೇದ ವಿತ್ತು.ಅನ್ಯ ದರ್ಶನಶಾಸ್ತ್ರಗಳ ಪೂರ್ವ ಪಕ್ಷದಲ್ಲಿಯೂ ಕೂಡ ವೇದಾಂತವೆಂದು ಪೂರ್ವ ಪಕ್ಷವಾಗಿ ಅನುವಾದಿಸಿದ್ದು  ಅದ್ವೈತ ಸಿದ್ಧಾಂತ ವನ್ನೇ! ಅಲ್ಲಿಗೆ
ವೇದಾಂತವೆಂದರೆ ಅದೈತ ದರ್ಶನವೇ ಎಂದು ಸಿದ್ಧವಾಗುತ್ತದೆ. ಈ ವೈದಿಕ
ಸಿದ್ಧಾಂತವೇ ಸಮ್ಯಗ್‌ದರ್ಶನ. ಇದೇ ಔಪನಿಷದ ದರ್ಶನವೆಂದು ಶಂಕರಾಚಾರ್ಯರ ಮತ್ತು ಅವರ ಪೂರ್ವಿಕರೆಲ್ಲರ
ಸಿದ್ಧಾಂತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ