ಮಂಗಳವಾರ, ಏಪ್ರಿಲ್ 6, 2021

ಸನಾತನಧರ್ಮದ, ವರ್ಣ(ಜಾತಿ) ಪದ್ಧತಿ

ಜನ್ಮದಿಂದ ಬಂದ ಜಾತಿ(ವರ್ಣ)  ಜಾತಿಯೇ ಅಲ್ಲವೇ ?

ಇತ್ತೀಚಿನ ದಿನಗಳಲ್ಲಿ 
" ಪ್ರಗತಿಪರ ಚಿಂತಕರು" ಎಂಬುದಾಗಿ ತಮ್ಮನ್ನು ತಾವೇ ಕರೆದುಕೊಂಡು ಸನಾತನ ಸಂಸ್ಕೃತಿಗೆ ವಿರುದ್ಧವಾದ ಮಾತುಗಳನ್ನಾಡುತ್ತ ಶಿಷ್ಟರ ಆಚರಣೆಯಲ್ಲಿ ಮತಿಭೇದವನ್ನುಂಟು ಮಾಡುತ್ತಿದ್ದಾರೆ . ಅದರಲ್ಲೂ ವಿಶೇಷವಾಗಿ ವರ್ಣಸಂಕರವನ್ನುಂಟು ಮಾಡುತ್ತಿದ್ದಾರೆ.
                  ಅವರನ್ನು ವಿರೋಧಿಸುವ ಬರದಲ್ಲಿ ನಮ್ಮಲ್ಲಿನ ಕೆಲ ಬುದ್ಧಿವಂತರು ತಮ್ಮ ಅರೆಬರೆ ಜ್ಞಾನ ಮತ್ತು ಸನಾತನಧರ್ಮದಮೇಲಿನ ಅಪಾರ ಅಭಿಮಾನದಿಂದ ಅವರಿಗೆ ತಕ್ಕ ( ಎಂದರೆ ಸರ್ವಮಾನ್ಯವಾದ ) ಉತ್ತರನೀಡಲು ಹೋಗಿ  ಕೆಲವಿಚಿತ್ರವಾದಗಳಿಂದ ಧರ್ಮದ ಮೂಲ ಸ್ರೋತವನ್ನೇ ಅರ್ಥಮಾಡಿಕೊಳ್ಳದೇ ಸಾಂಪ್ರದಾಯಿಕವೂ ಅಲ್ಲದ ವೈಜ್ಞಾನಿಕವಾಗಿಯೂ ಅಲ್ಲದ ವಿಚಿತ್ರವಾದ ಸರಣಿಯನ್ನು ಸೃಷ್ಟಿಸಿ ಅದನ್ನೇ ಎಲ್ಲೆಡೆ ಪ್ರಸಾರಮಾಡುತ್ತಿದ್ದಾರೆ.ಅವರಿಗೂ ಗೊತ್ತಿಲ್ಲ ತಮ್ಮ ವಾದ ತಮ್ಮತನವನ್ನೇ ನಾಶ ಮಾಡುವುದು ಎಂದು. ಅಂತಹವರ ಅಪಭ್ರಂಶತರ್ಕವನ್ನು ಅನುಸರಿಸಿ ನಮ್ಮವರೇ ಅದರ ಬಗ್ಗೆ ಸರಿಯಾಗಿ ತಿಳಿಯದೇ ಹೌದೌದೆಂದು ತಲೆ ಅಲ್ಲಾಡಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇದು ಹೇಗಿದೆ ಎಂದರೆ ಒಬ್ಬ ಮರಕಡಿಯುವವ ತಾನು ಕುಳಿತ ಮರದ ರೆಂಬೆಯನ್ನೇ ಕಡಿಯುತ್ತಿರುವಂತೆ ಅವನ ಹಿಂದೆ ಅದೇ ರೆಂಬೆಯಲ್ಲಿ ಕುಳಿತವ ಅವನನ್ನು ಕಡಿಯುವಂತೆ ಪ್ರೋತ್ಸಾಹಿಸಿದರೆ ಹೇಗಿರುವುದೋ ಹಾಗಿದೆ...
ಇದು ನಾಸ್ತಿಕರ ವಾದಕ್ಕಿಂತಲೂ ಘೋರವಾದ ಪರಿಣಾಮವನ್ನು ಬೀರುತ್ತದೆ. (ಆರ್ಯಸಮಾಜ ಮಾಡಿದ್ದೂ ಇದನ್ನೇ..) ಈ  ಅರೆಬರೆ ಜ್ಞಾನ ಅಜ್ಞಾನಕ್ಕಿಂತ ಘೋರಪರಿಣಾಮವನ್ನು ಉಂಟುಮಾಡುತ್ತದೆ.

"ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ" ಎಂಬುದು ಭಗವಂತನ ವಾಣಿ . ನಮ್ಮ-ನಮ್ಮ ಸಂಸ್ಕಾರಕ್ಕನುಗುಣವಾಗಿ ಬ್ರಾಹ್ಮಣಾದಿ ವರ್ಣಗಳಲ್ಲಿ ಜನ್ಮವಾಗುವುದೆ ವಿನಃ ; ಜನ್ಮದ ನಂತರ ಕರ್ಮಕ್ಕೆ ಅನುಸಾರವಾಗಿ ವರ್ಣವ್ಯವಸ್ಥೆ ಇರುವುದಿಲ್ಲ . ಒಂದು ವೇಳೆ ಜನನವಾದ  ನಂತರದಲ್ಲಿ ಕರ್ಮಕ್ಕೆ ಅನುಸಾರವಾಗಿ ವರ್ಣ ವ್ಯವಸ್ಥೆಯನ್ನು ಮಾಡುವುದಾದರೆ ; ವರ್ಣವ್ಯವಸ್ಥೆಯ ಅವಶ್ಯಕತೆ ಯಾದರೂ ಏನು..? ಅಲ್ಲದೆ ಈ ರೀತಿ ವ್ಯವಸ್ಥೆಗೆ ಯಾವುದೇ ಪ್ರಮಾಣವು ಇರುವುದಿಲ್ಲ .ವೇದ ಮತ್ತು ಸ್ಮೃತಿಗಳಲ್ಲಿ ಬರುವ "ಅಷ್ಟಮೇ ಬ್ರಾಹ್ಮಣಮುಪನಿಯೀತ " ಎನ್ನುವ ವಾಕ್ಯಗಳೆಲ್ಲಾ ನಿರರ್ಥಕವೇ ಸರಿ. "ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ " ಎನ್ನುವ ಗೀತೆಯ ಮಾತೇಕೆ ಬೇಕು.
ಮಹಾಭಾರತ ಯುದ್ಧದ ನಂತರ ಸನತ್ಸುಜಾತೀಯ ಎನ್ನುವ ಭಾಗವಿದೆ. ಅದರಲ್ಲಿ ಧರ್ಮದ ಅಧಿದೇವತೆ ಯಮನ ಅವತಾರವಾದ ವಿದುರ ಸ್ವತಃ ಬ್ರಹ್ಮಜ್ಞಾನಿಯಾದರೂ ಧೃತರಾಷ್ಟ್ರ ಬ್ರಹ್ಮಜ್ಞಾನವನ್ನು ಉಪದೇಶಿಸುವಂತೆ ಕೇಳಿದಾಗ ನಾನು ಜನ್ಮದಿಂದ ಶೂದ್ರನು ನನಗೆ ವೇದಾಂತವನ್ನು ಉಪದೇಶಿಸುವುದಕ್ಕೆ ಅಧಿಕಾರವಿಲ್ಲ ಎಂದು ತನ್ನ ಯೋಗಶಕ್ತಿಯಿಂದ ಬ್ರಾಹ್ಮಣರಾದ ಸನತ್ಸುಜಾತರನ್ನು ಕರೆಸಿ ಧೃತರಾಷ್ಟ್ರನಿಗೆ ವೇದೋಪನಿಷತ್ತುಗಳ ಜ್ಞಾನವನ್ನು ಮಾಡಿಸುತ್ತಾನೆ. ಅದನ್ನು ಬರೆದವರೂ ವೇದವ್ಯಾಸರು. ಅವರು ಬೇಸ್ತಕನ್ಯೆಯಲ್ಲಿ ಹುಟ್ಟಿದವರು ಎಂದು ವಾದಿಸುವ ಮಂದಿ ಅವರು ಹುಟ್ಟಿದೊಡನೆ ಬೆಳೆದು ನಿಂತವರು ಮತ್ತು ಅವರ ಜನ್ಮದ ನಂತರವೂ ಅವರ ತಾಯಿ ಕನ್ಯೆಯಾಗಿಯೇ ಉಳಿದಳು ಅವಳ ಶರೀರದಿಂದ ಬರುತ್ತಿದ್ದ ಮತ್ತ್ಸದ ದುರ್ಗಂಧದ ಬದಲು ಒಂಬತ್ತು ಯೋಜನದವರೆಗೆ ಹರಡುವ ಸುಗಂಧವನ್ನು ಸೃಷ್ಟಿಸಿದ ಮಹಾಮಹಿಮ ಪರಾಶರರ ತಪೋ ಬಲದ ಬಗ್ಗೆ ಹೇಳಲಾರರು . ಅವರು ನಮ್ಮನ್ನು ಕೇಳುವುದು " ಮಹಾತ್ಮರಾದವರೇ ಮಾಡಿದ್ದಾರೆ ನೀವೇಕೆ ಅದನ್ನು ತಪ್ಪು ಎನ್ನುತ್ತೀರಿ" ಎನ್ನುವುದು ಮಾತ್ರ  ಅವರಿಗೆ ಬೇಕಾಗಿರುವುದು. (ಮಹಾತ್ಮರೂ ಅವಧೂತರೂ ನಿಗ್ರಹಾನುಗ್ರಹ ಶಕ್ತಿಯುಳ್ಳವರೂ ಮಾಡಿದ್ದೆಲ್ಲವನ್ನೂ ನಾವು ಮಾಡಲಾಗುವುದಿಲ್ಲ..ಉದಾಹರಣೆಗೆ ಜಮದಗ್ನಿಯು ಪರಶುರಾಮನಿಗೆ ತಾಯಿಯ ತಲೆಯನ್ನೇ ಕತ್ತರಿಸುವಂತೆ ಹೇಳಿದ.ಪರಶುರಾಮ  ಅದನ್ನು ಪಾಲಿಸಿದ .ಅದರಿಂದ ಸಂತೋಷವಾಗಿ ಅವನ ಕೋರಿಕೆಯಂತೆ  ಮತ್ತೆ ಅವಳನ್ನು ಬದುಕಿಸಿದ ಜಮದಗ್ನಿಯ ತಪೋಬಲದ ಬಗ್ಗೆ  ನಮಗೆ ಕಲ್ಪನೆಯಾದರೂ ಆದೀತೆ... ಹಾಗಾಗಿ ನಮಗೆ ಅವರ ನಡವಳಿಕೆಗಿಂತ ನಮಗೆ ಶಾಸ್ತ್ರಗಳೇ ಪ್ರಮಾಣಗಳು . ಅದಕ್ಕಾಗಿಯೇ  ಗೀತೆಯಲ್ಲಿ "ತಸ್ಮಾತ್ ಶಾಸ್ತ್ರಂ ಪ್ರಮಾಣಂತೇ ಕಾರ್ಯಾಕಾರ್ಯವ್ಯವಸ್ಥಿತೌ" ಎಂದಿರುವುದು. )

ವರ್ಣಸಂಕರವನ್ನುಂಟುಮಾಡಿ ವರ್ಣವ್ಯವಸ್ಥೆಯನ್ನು ಹಾಳುಗೆಡುವುದು. ಅದರಿಂದ ಇಡೀ ಸನಾತನಧರ್ಮವೇ ನಾಶವಾಗುವುದು. ಇದು ಅವರಿಗೆ ತಿಳಿದಿಲ್ಲ . ಇನ್ನು ಸನಾತನಧರ್ಮವನ್ನು ವಿರೋಧಿಸುವ ನಾಸ್ತಿಕರಂತು ಇದರಿಂದ ತಮ್ಮ ಕಾರ್ಯ ಸಾಧನೆ ಆಗುವುದು ಎಂದು ಸುಮ್ಮನೆ ನಿಮ್ಮ ಉತ್ತರ ಸಮಂಜಸವಾಗಿದೆ ಎಂದು ಇವರನ್ನು ಹೆಗಲು ತಟ್ಟಿ ಅಟ್ಟಕ್ಕೆರಿಸಿಬಿಡುತ್ತಾರೆ. ಆದರೆ ವಾಸ್ತವ ಸಂಗತಿ ಬೇರೆಯದೇ ಇದೆ.

"ಯಂ ಯಂವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇ"ಎನ್ನುವ ಮಾತಿನಂತೆ ಕೊನೆಯಗಳಿಗೆಯಲ್ಲಿ ಯಾವ ಯಾವ ಭಾವದಿಂದ ದೇಹವನ್ನುತ್ಯಜಿಸುತ್ತಾನೋ  ಅದೇ ಭಾವವನ್ನು ಮುಂದಿನ ಜನ್ಮದಲ್ಲಿ ಜೀವಾತ್ಮಪಡೆಯುತ್ತಾನೆ . ಆಯಾಪೂರ್ವ ಜನ್ಮದ ಕರ್ಮದ ಅನುಸಾರವಾಗಿ ಬ್ರಾಹ್ಮಣಾದಿ ವರ್ಣಗಳಲ್ಲಿ ( ಪಶು-ಪಕ್ಷ್ಯಾದಿ ಸ್ಥಾವರಾಂತ) ಜನ್ಮವಾಗುತ್ತದೆ ಎಂಬುದು ಪ್ರಮಾಣ ಪೂರ್ವಕದ್ದಾಗಿದೆ. ಶಿಷ್ಟರಾದವರು ಇಂತಹ ಸಂಪ್ರದಾಯದ ವಿರುದ್ಧವಾದ ಮಾತಿಗೆ ಕಿವಿಗೊಡದೆ , ತಮ್ಮ ತಮ್ಮ ವರ್ಣ ಹಾಗು ಆಶ್ರಮಕ್ಕೆ ವಿಹಿತವಾದ ಧರ್ಮಾನುಷ್ಠಾನವನ್ನು ಮಾಡಿದ್ದರಿಂದ ಭಗವತ್ಪ್ರಾಪ್ತಿ ಆಗುತ್ತದೆ ಎಂಬುದು ಸತ್ಯವಾದ ವಿಷಯವಾಗಿದೆ .

" ಯತಃ ಪ್ರವತ್ತಿಭೂತಾನಾಂ ಯೇನ ಸರ್ವಮಿದಂ ತತಂ | ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ದಿಂವಿಂದಂತಿ ಮಾನವಃ ||"
"ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ | ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ ||"
                          ಅಲ್ಲದೆ ಕೆಲವು ಪಾಠಶಾಲೆಗಳಲ್ಲೂ ಸಹ ಪ್ರಮಾಣಕ್ಕೆ ವಿರುದ್ಧವಾಗಿ ಸಾರ್ವಜನಿಕವಾಗಿ ( ಅನಧಿಕಾರಿಗಳಿಗೆ ) "ವೇದೋಪನಿಷತ್ತುಗಳ" ಪಾಠ-ಪ್ರವಚನಗಳನ್ನು ಮಾಡುವುದು ವಿಷಾದನೀಯ ಸಂಗತಿಯಾಗಿದೆ .
   ಇವತ್ತಿನ ಕಾಲಘಟ್ಟದಲ್ಲಿ ವಿದೇಶೀಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಬಹಳ ಮಂದಿ ಜನರು ತಮ್ಮ ಸ್ವಧರ್ಮ ದಿಂದ ಚ್ಯುತರಾಗುತ್ತರುವುದು ಸಾಮಾನ್ಯವಾಗಿದೆ .
ಪ್ರತಿಯೊಬ್ಬರು ತಮ್ಮ ತಮ್ಮ ವರ್ಣದ (ವರ್ಣಾಶ್ರಮಕ್ಕೆ ವಿಹಿತವಾದ )ಕರ್ತವ್ಯವನ್ನು ಪಾಲಸಿ ಭಗವಂತನ ಕೃಪೆಗೆ ಪಾತ್ರರಾಗೊಣ .ಹಾಗೂ ಬೇರೆ ಸಂಸ್ಕೃತಿಯಿಂದ ಉಂಟಾದ ಅಜ್ಞಾನನವು ದೂರವಾಗಿ ಸುಜ್ಞಾನ ಪ್ರಾಪ್ತವಾಗಲೆಂದು ಭಗವಂತನನಲ್ಲಿ ಪ್ರಾರ್ಥಿಸೊಣ .
          "ಜಯತು ಸನಾತನ ಸಂಸ್ಕೃತಿಃ "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ