ಭಾರತ ಆಧ್ಯಾತ್ಮ ಜಗತ್ತಿಗೇ ಕಳಸಪ್ರಾಯವಾದ ದೇಶ. ದೇವತೆಗಳು ಅವತರಿಸಲು ಆಯ್ದುಕೊಳ್ಳುವುದೂ ಪುಣ್ಯ ಭೂಮಿ ಭರತ ವರ್ಷವನ್ನೇ. ಇಲ್ಲಿ ಅನೇಕ ಮಹಾತ್ಮರು, ದಾರ್ಶನಿಕರು, ಸಂತರು ಆಗಿಹೋಗಿದ್ದಾರೆ. ಆ ಎಲ್ಲಾ ಮಹಾತ್ಮರಲ್ಲಿ ಸುಮೇರು ಪರ್ವತದಂತಿರುವವರು ಜಗದ್ಗುರು ಶಂಕರಾರ್ಚಾರ್ಯರು. ಶಂಕರ ಭಗವತ್ಪಾದರು ಅವತರಿಸಿ ಸಾವಿರಾರು ವರ್ಷಗಳು ಕಳೆದರೂ ಅವರ ಹೆಸರು ಇಂದಿಗೂ ಭಾರತದಾದ್ಯಂತ ಪ್ರೇರಕ ಶಕ್ತಿಯಾಗಿ, ಚೈತನ್ಯವಾಗಿ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವಂತೆ ಮಾಡಿದೆ. ಬಾಲ್ಯದ ಐದನೇ ವಯಸ್ಸಿನಲ್ಲಿ ಉಪನಯನ,ಎಂಟನೇ ವಯಸ್ಸಿನಲ್ಲಿ ಆರು ಅಂಗಗಳ ಸಹಿತವಾದ ನಾಲ್ಕು ವೇದಗಳಲ್ಲಿ,ಮತ್ತು ಹನ್ನೆರಡನೆ ವಯಸ್ಸಿನಲ್ಲಿ ಸಮಸ್ತ ಎಲ್ಲ ದರ್ಶನಶಾಸ್ತ್ರಗಳಲ್ಲಿ
ಪಾಂಡಿತ್ಯ, ಹನ್ನೆರಡನೇವಯಸ್ಸಿನಲ್ಲಿಯೇ ಸಂನ್ಯಾಸ ಸ್ವೀಕರಿಸಿದ ಶಂಕರ ಭಗವತ್ಪಾದರು ಇಂದಿನ ಯುವಕರೂ ತಲೆ ಕೆಳಗೆ ಹಾಕುವಂತೆ ಪ್ರಯಾಣದ ಸಾಧನಗಳೇ ಇಲ್ಲದಿದ್ದ ಅಂದಿನ ದಿನಗಳಲ್ಲಿ ದಕ್ಷಿಣದಿಂದ ಹಿಮಾಲಯದ ತುದಿಗಳನ್ನು ಕಾಲ್ನಡಿಗೆಯಲ್ಲಿಯ
ೇ ನೋಡಿದ್ದರು. ಕಾಳಿದಾಸನೂ ನಾಚುವಂತೆ ಸ್ತೋತ್ರ ಕಾವ್ಯಗಳನ್ನು ರಚಿಸಿದ್ದರು.
ವೇದಗಳ ಪರಮ ತಾತ್ಪರ್ಯಗಳನ್ನು ಸಂಕ್ಷಿಪ್ತ ಸೂತ್ರಗಳಾಗಿ ಮಾಡಿದ್ದ ಬಾದರಾಯಣರ ಸೂತ್ರಗಳಿಗೆ ಶಂಕರರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ (16 ನೇ ವಯಸ್ಸಿನಲ್ಲೇ)ಪ್ರಸನ್ನ ಗಂಭೀರವಾದ ಭಾಷ್ಯಗಳನ್ನು ಬರೆದು ಮುಂದಿನ ಪರಂಪರೆಗೆ ತಿಳಿಸಿದ್ದಾರೆ. ಇಂಥಹ ಒಬ್ಬರು ದಾರ್ಶನಿಕರು ಮತ್ತೊಬ್ಬರಿರಲಾರರು. ಕಾಲ, ದೇಶ, ಧರ್ಮಗಳನ್ನು ಮೀರಿದ ಪರಮಸತ್ಯದ ಅವರ ನಿರೂಪಣೆ ಇಂದಿಗೂ ಮುಂದೆಂದಿಗೂ ಕೂಡ ಶ್ಲಾಘನೀಯವಾದದ್ದು. ಅವರು ಬರೆದ ಸ್ತೋತ್ರಗಳು, ಸೌಂದರ್ಯ ಲಹರ್ಯಾದಿಗಳು ಅಕ್ಷರ ಶಾರೆದೆಯೇ ಎಂಬ ಭಾವನೆ ಮೂಡಿಸದಿರದು . ಸನಾತನ ಧರ್ಮದ ರಕ್ಷಣೆ ಮಾಡಿ ದೇಶದ ಕಲ್ಪನೆ ನೀಡಿದ ಶಂಕರ ಭಗವತ್ಪಾದರು ಸರ್ವರಿಗೂ ಪೂಜನೀಯರು. ಇಷ್ಟಕ್ಕೂ ನಾವೇಕೆ ಶಂಕರರನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸಬೇಕು ಗೊತ್ತಾ? ಕೇವಲ ಅವರೊಬ್ಬ ವಿದ್ವಾಂಸರಾಗಿದ್ದಿದ್ದರೆ ಅಥವಾ ಅತಿ ಸಣ್ಣ ವಯಸ್ಸಿನಲ್ಲೆ ವೇದ- ವೇದಾಂಗ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡಿದ್ದರೆ ಕೇವಲ ಅದ್ಭುತ ಶಾಸ್ತ್ರಜ್ಞರೋ ಪಂಡಿತರೋ ಆಗಿದ್ದಿದ್ದರೆ ಗೌರವಾದರಗಳನ್ನು ಪಡೆಯಲು ಮಂಡನಮಿಶ್ರ, ಕುಮಾರಿಲಭಟ್ಟರಂತಹ ಪಂಡಿತರು ಅಂದಿಗೂ ಇದ್ದರು, ಅಪರೂಪಕ್ಕೆ ಇಂದಿಗೂ ಒಂದಿಬ್ಬರು ಸಿಗುಬಹುದು. ನಾವೇಕೆ ಶಂಕರರಿಗೆ ಕೃತಜ್ಞರಾಗಿರಬೇಕು ಅಥವಾ ಗೌರವಿಸಬೇಕೆಂದರೆ ಅವರು ಜೀವಿಸಿ- ಮುಕ್ತರಾದ ಸಾವಿರ ವರ್ಷಗಳು ಕಳೆದರೂ ನಾವು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನೂ ಎದುರಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋದರಲ್ಲಾ, ಅಂತಹ ದೂರದೃಷ್ಟಿ, ಸಾವಿರ ವರ್ಷಗಳು ಕಳೆದರೂ ಧರ್ಮಕ್ಕೆ ವಿಪ್ಲವ ಬರದಂತಹ ವಾತಾವರಣ ನಿರ್ಮಿಸಿದ್ದರು. ಅಸ್ಮಿತೆ ವಿಷಯದಲ್ಲಿ ಉಳಿದವರಿಗಿಂತ ತುಸು ಹೆಚ್ಚೇ ಕಾಳಜಿಯುಳ್ಳವರು, ಅಸ್ಮಿತೆಗೆ ಪೆಟ್ಟು ಬಿದ್ದು ಧರ್ಮಕ್ಕೇ ಕಂಟಕ ಎದುರಾದಾಗ ಸಣ್ಣ ಸಹಾಯ ಮಾಡಿದವರನ್ನು ನಾವೆಂದೂ ಮರೆಯುವುದಿಲ್ಲ ಅಂಥದ್ದರಲ್ಲಿ, ವೇದಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಕರ್ಮಮಾರ್ಗದ ಮೂಲಕ ಉಸಿರುಕಟ್ಟಿಸುವಂತಹ ಕಟ್ಟುಪಾಡುಗಳನ್ನು ವಿಧಿಸಿ ಸನಾತನ ಧರ್ಮಕ್ಕೆ ವಿನಾಶದ ಪರಿಸ್ಥಿತಿ ಎದುರಾಗಿದ್ದಾಗ ಅದನ್ನು ಸುಧಾರಿಸಿದವರು ಶಂಕರರು. ಈ ಕಾರಣಕ್ಕಾಗಿಯೇ ನಾವು ಶಂಕರರಿಗೆ ಕೃತಜ್ಞರಾಗಿರಬೇಕು. ಸನ್ಯಾಸದ ನಂತರವೂ ತಾಯಿಗೆ ಅಂತ್ಯಕ್ರಿಯೆ ಮಾಡಿದ್ದ ಶಂಕರರು ಕರ್ಮ ಸಿದ್ಧಾಂತವೇ ಅಂತಿಮವಲ್ಲ ಜ್ಞಾನಿಗೇ ಪೂಜ್ಯತೆ ಎಂಬುದನ್ನು ತೋರಿಸಲು ಕಾಶಿಯಲ್ಲಿ ಎದುರಾದ ಅಸ್ಪೃಶ್ಯ ಚಾಂಡಾಲ ವ್ಯಕ್ತಿಯನ್ನು ಪಕ್ಕಕ್ಕೆ ಸರಿಯಲು ಹೇಳುತ್ತಾರೆ ಅವನು ನೀನು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ? ಎಂದು ಕೇಳಲು ಅವನೇ ತನ್ನನ್ನು ಪರೀಕ್ಷಿಸಲು ಬಂದ ಪರಶಿವನೆಂದು ಅರಿತು ಅವನಿಗೆ ಕೈ ಮುಗಿದು ಐದು ಶ್ಲೋಕಗಳಿಂದ ಸ್ತುತಿಸುತ್ತಾರೆ, ಈ ಮೂಲಕ ಅಂದಿನ ಕಾಲಕ್ಕೆ ಸ್ಥಾಪಿತವಾಗಿದ್ದ ಕಟ್ಟುಪಾಡುಗಳಿಗೆ ತಿಲಾಂಜಲಿ ಇತ್ತಿದ್ದರು.
ಈ ಹಿಂದೆಯೇ ಹೇಳಿದಂತೆ ವೇದಗಳ ಪ್ರಮಾಣವನ್ನು, ಸಿದ್ಧಾಂತಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದನ್ನೇ ಪ್ರಚಾರ ಮಾಡುತ್ತಾ, ಉಸಿರುಕಟ್ಟುವಂತಹ ಕಟ್ಟುಪಾಡುಗಳನ್ನು ವಿಧಿಸಿ ಸನಾತನ ಧರ್ಮದ ಆಶಯಕ್ಕೇ ಕೊಡಲಿ ಪೆಟ್ಟು ಕೊಟ್ಟಿದ್ದಾಗಿತ್ತು.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಾಗೇ ಯಜ್ಞ ಯಾಗಾದಿಗಳು ಸುಳ್ಳು ಅವುಗಳನ್ನು ಮಾಡುವುದು ಕೇವಲ ಮೂಢನಂಬಿಕೆ ಇತ್ಯಾದಿ ವೇದ ವಿರುದ್ಧ ಅಭಿಪ್ರಾಯಗಳು ಮತ್ತು ವೈದಿಕರಲ್ಲಿಯೇ ನಾನು ಪಂಡಿತ ,ಭಾರೀ ಅನುಷ್ಠಾನಿಕ ,ಜೋತಿಷೀ ಎಂದು ಸೋಗು ಹಾಕಿಕೊಂಡು ಜನರನ್ನು ಆ ದೋಷ ಈ ದೋಷಗಳೆಂದು ಹೆದರಿಸಿ ಅಶಾಸ್ತ್ರೀಯ ಹೋಮ ಹವನಗಳನ್ನು ಮಾಡುತ್ತಾ ವೇದ ಧರ್ಮದ ಮೇಲೆ ಜನರಿಗೆ ಜಿಗುಪ್ಸೆ ಮೂಡುವಂತೆ ಮಾಡಿ ವೇದಧರ್ಮವನ್ನು ಸ್ವಧರ್ಮಿಯರು ಪರಧರ್ಮಿಯರು ಎಲ್ಲರೂ ದ್ವೇಷಿಸುವಂತೆಯಾಗಿತ್ತು. ಇಂತಹ ಪರಿಸ್ಥಿತಿಯನ್ನು ಸುಧಾರಿಸಿ, ವೇದಗಳಲ್ಲಿ ಕೇವಲ ಕರ್ಮಮಾರ್ಗ ಒಂದೇ ಅಲ್ಲ .ವೇದಗಳ ಪರಮ ಚರಮ ಲಕ್ಷ್ಯ ಜ್ಞಾನಮಾರ್ಗವೇ ಆಗಿದೆ ಎಂದು ತಿಳಿಸಲು ಶಂಕರರು ಭಾರತದಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸಿ ಜನರಿಗೆ ವೇದಧರ್ಮದ ಪರಮ ತತ್ವವನ್ನು ತಿಳಿಸಿ, ಪ್ರತಿಪಕ್ಷಿಗಳಾದ ವಿದ್ವಾಂಸರ ಪಂಡಿತರ ತಪ್ಪುಗಳನ್ನು ತೋರಿಸಿ ತಮ್ಮ ತಪ್ಪನ್ನು ತಾವೇ ತಿದ್ದಿಕೊಳ್ಳುವಂತೆ ಮಾಡಿದ್ದರು. ಹಾಗೆಂದ ಮಾತ್ರಕ್ಕೆ ಶಂಕರರು ಭೇಟಿ ಮಾಡಿದ ಎಲ್ಲಾ ಪಂಡಿತರು, ವಿದ್ವಾಂಸರೆಲ್ಲಾ ಶಂಕರರ ತತ್ವ-ಸಿದ್ಧಾಂತಗಳನ್ನು ಒಂದೇ ಏಟಿಕೆ ಒಪ್ಪುತ್ತಿರಲಿಲ್ಲ. ಮಾಧವೀಯ ಶಂಕರ ವಿಜಯದಲ್ಲಿ ಇದಕ್ಕೆ ಸಂಬಂಧಿಸಿದ ಸ್ವಾರಸ್ಯಕರವಾದ ಸಂಗತಿಗಳು, ಸಂದರ್ಭಗಳನ್ನು ವಿವರಿಸಿದ್ದಾರೆ. ಬ್ರಹ್ಮನೇ ಎದುರಾದರೂ ವಾದದಲ್ಲಿ ಜಯಿಸುತ್ತೇವೆ ಎಂಬ ಅಹಂಕಾರದ ಸ್ಥಿತಿಯಲ್ಲಿದ್ದ ಪಂಡಿತರನ್ನೂ ಸಹ ಶಂಕರರು ವಾದದಲ್ಲಿ ಗೆದ್ದು ಜಿತೋಸ್ಮಿ ಎನಿಸಿದ್ದರು. ಶಂಕರರೊಂದಿಗೆ ವಾದದಲ್ಲಿ ಪರಾಜಯಗೊಂಡ ನಂತರ ತಮ್ಮ ಗುರುಗಳಾದ ಜೈಮಿನಿ ಮಹರ್ಷಿಗಳು ಹೇಳಿದ್ದ ಕರ್ಮ ಸಿದ್ಧಾಂತ ತಪ್ಪು ಎಂದು ಸಾಬೀತಾಗಿದ್ದ ವ್ಯಥೆಯಲ್ಲಿದ್ದ ಮಹಾಮೀಮಾಂಸಕ, ಯಜ್ಞ ಕರ್ಮವೇ ಮೋಕ್ಷ ಸಾಧನ ಎಂದು ನಂಬಿದ್ದ ಮಂಡನಮಿಶ್ರರಿಗೆ ಸ್ವತಃ ಜೈಮಿನಿ ಮಹರ್ಷಿಗಳೇ ಬಂದು " ನಾನು ಹೇಳಿದ್ದ ಸಿದ್ಧಾಂತವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೆಂದೂ, ಶಂಕರರು ಹೇಳಿರುವ ತತ್ವ ನಮ್ಮ ಗುರುಗಳಾದ ವ್ಯಾಸರು ಹೇಳಿರುವ ತತ್ವವೇ ಆಗಿದೆ ''ಎಂದು ಹೇಳಬೇಕಾಗಿ ಬಂತು, ಶಂಕರರಿಗೆ ಅದ್ವೈತ ಸಿದ್ಧಾಂತದ ಬಗ್ಗೆ ಅಂತಹ ತಿಳುವಳಿಕೆ, ಅಪ್ರಕಂಪ್ಯವಾದ ನಂಬಿಕೆ ಇತ್ತು, ಆದ್ದರಿಂದಲೇ ಶಂಕರರನ್ನು ಯಾರೂ ಸಹ ವಾದದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗೆಯೇ ಇನ್ನು ಮುಂದೆ ಧರ್ಮಕ್ಕೆ ಚ್ಯುತಿ ಬರದೇ ಇರುವಂತೆ ಎಚ್ಚರ ವಹಿಸಲು ಶಂಕರರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ದಕ್ಷಿಣದಲ್ಲಿ: ಶೃಂಗೇರಿ ಪೀಠ - ದಕ್ಷಿಣ ಶಾರದಾ ಮಠ ಪೂರ್ವದಲ್ಲಿ: ಪುರಿ ಪೀಠ - ಪೂರ್ವಾ ಗೋವರ್ಧನ ಮಠ ಪಶ್ಚಿಮದಲ್ಲಿ ದ್ವಾರಕಾ ಪೀಠ - ಪಶ್ಚಿಮ ಮಠ) ಸ್ಥಾಪನೆ ಮಾಡಿದರು.
ಇನ್ನು ಶಂಕರರು ನಾಲ್ಕು ಆಮ್ನಾಯ ಮಠಗಳ ಜೊತೆಗೆ ಆರಾಧಕರಲ್ಲಿ ಪರಸ್ಪರ ಕಾದಾಟ ಹೋಗಲಾಡಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸ್ಮಾರ್ತ ಸಂಪ್ರದಾಯವನ್ನು ಮರು ಹುಟ್ಟುಹಾಕಿದರು, ಇದೇ ಮುಂದೆ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು, ಮತ್ತು ಸ್ಕಂದ ಇವರ ಆರಾಧಕರ ನಡುವಿನ ಸಾಮರಸ್ಯಕ್ಕೆ ಕಾರಣವಾಯಿತು. ಸಾವಿರದ ಇನ್ನೂರು ವರ್ಷಗಳ ಹಿಂದೆ, ಕೇವಲ ಮೂವತ್ತೆರಡು ವರ್ಷ ಬದುಕಿದ್ದರೂ ಇಡೀ ಭಾರತಕ್ಕೆ ಅನ್ವಯವಾಗುವ ಸಂಪ್ರದಾಯವನ್ನು ಹುಟ್ಟು ಹಾಕಿ ಜನರು ಅದನ್ನು ಅನುಸರಿಸುವಂತೆ ಪ್ರಭಾವ ಮಾಡಿದ್ದು, ಅವರ ಅತಿದೊಡ್ಡ ಸಾಧನೆ. ಅಲ್ಲದೆ, ಅವರ ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ವಿದ್ವತ್ಜಗತ್ತನ್ನೇ ಬೆರಗುಗೊಳಿಸಿದೆ. ಅವರಿರದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು ಹಿಂದೂ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ .ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ. ಅದಕ್ಕಾಗಿಯೇ ಇನ್ನು ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ.....